ಶುಕ್ರವಾರ, ಡಿಸೆಂಬರ್ 4, 2015

ಹೆಸರಿಲ್ಲದ್ದು

                     ನಾನೂ ಒಂದು ಕವನ ಬರೆಯಬೇಕಿದೆ ಹೆಸರಿಲ್ಲದ್ದು



ನಾನೂ ಒಂದು ಕವನ ಬರೆಯಬೇಕಿದೆ ಹೆಸರಿಲ್ಲದ್ದು
ನಾನೋ-ಯಾರೋ ಬರೆದ ಹಳೆಯ ಸಾಲು ಕಾಣದಂತದ್ದು
ಹೊಸತಾದ ತೊಗಲು-ಬಣ್ಣಗಳ ಹೊರದೆ ಮೆರೆಯುವಂತದ್ದು
ಲಘು-ಗುರು-ಗಣ-ಯತಿ-ಕಾಲಗಳ ಅಂಕೆ ಇಲ್ಲದ್ದು
ಅರ್ಥ-ತತ್ವ-ಮರ್ಮ-ತರ್ಕ-ನಿಗೂಡಗಳ ಶಂಕೆ ಇಲ್ಲದ್ದು
ಜಾತಿ-ಧರ್ಮ-ರಾಜನೀತಿಗಳ ಕೆಣಕುವಂತದ್ದು
ಗುಣ-ರೂಪ-ವಿರೂಪಗಳಲ್ಲಿ ಸಿಲುಕದಂತದ್ದು
ಹುಟ್ಟು-ಸಾವುಗಳನ್ನು ನೆನೆಯಲೊಲ್ಲದ್ದು 
ಕಷ್ಟ-ಇಷ್ಟಗಳ ಬಯಸದಂತದ್ದು
ಹೊಗಳಿಕೆಗೆ ಕರಗದಂತದ್ದು
ತೆಗಳಿಕೆಗೆ ಮರುಗದಂತದ್ದು
ಇಂತದ್ದು
ನಾನೂ ಒಂದು ಕವನ ಬರೆಯಬೇಕಿದೆ ಹೆಸರಿಲ್ಲದ್ದು



- ವಿವೇಕ್ ರಾವ್

ಮಂಗಳವಾರ, ಸೆಪ್ಟೆಂಬರ್ 22, 2015

ಮನವೇ...


ಮನವೇ...



ಎತ್ತೆತ್ತಲೂ ಇರುವ ಕಡುಗತ್ತಲ ನೋಡಿ
ನಿದಿರೆಯ ಮಡಿಲೇಕೆ ಸೇರುತಿರುವೆ?
ಹಿಡಿಯಲೇ ಬೇಕಿಹುದು ಅರಿವಿನ ದೀವಟಿಗೆ
ಮಲಗಿದ್ದು ಸಾಕಿನ್ನು ಏಳು ಮನವೇ....

ಯಾರೊ ಆಡಿದ ಮಾತ ತಲೆಯಮೆಲೆಯೇ ಹೊತ್ತು
ನುಡಿಯ ಸುಳಿಯಲದೇಕೆ ಈಸುತಿರುವೆ?
ನಿನ್ನೆ ಮೊನ್ನೆಯ ಬದುಕ ಮೆಲುಕು ಹಾಕುವುದೇಕೆ?
ಕುಳಿತಿದ್ದು ಸಾಕಿನ್ನು ಏಳು ಮನವೇ....

ನಿಂತ ಕಾನನದಲ್ಲಿ ನೂರಿಹವು ದಾರಿಗಳು
ಮತ್ತೆ ಯಾತರ ಕುರಿತು ಯೋಚಿಸಿರುವೆ?
ಯಾರೋ ತೆರಳಿದ ಹಾದಿ ಹುಡುಕಿ ಕಾಯುತ ಇನ್ನು
ನಿಂತಿದು ಸಾಕಿನ್ನು ಸಾಗು ಮನವೇ...




ಬುಧವಾರ, ಆಗಸ್ಟ್ 14, 2013

ಬೈರಾಗಿ

ಬರಿದು ಜೋಳಿಗೆ ಹೊತ್ತು ಅಲೆಯುತಿಹೆ ನಾನು
ಹುಡುಕುತಲಿ ಹುಸಿಯಿರದ ನಗೆಯೊಂದನು

ತುಟಿಯ ಅಂಚುಗಳೆರೆಡ ಕೊಂಚ ಮೇಲಕೆ ಎತ್ತಿ
ಯಾರು ಕಾಣದ ಹಾಗೆ ಮೆಲ್ಲ ಕೊಕ್ಕೆಗೆ ಮೆತ್ತಿ
ನಡೆಯುತಿಹರೊಂದೊಂದು ತೊಗಲ ಹೊತ್ತು
ಮರೆಸಿ ನಗೆಗೂ ತನ್ನ ಅಸಲಿಯತ್ತು

ಕಣ್ಣು ಕಾಣದೆ ಇರುವ ಕಪ್ಪಿಟ್ಟ ಇರುಳಿನಲೂ
ಎಲ್ಲ ಮಲಗಿಹರವರ ನಕಲಿತನ ಹೊದ್ದು
ತನ್ನತನಕೆಂದೇ ಮೂಡಿದ್ದ ನಗುವಿನಲೂ
ಮೆಲ್ಲ ಸೇರಿದೆ ಏಕೋ ನಿಟ್ಟುಸಿರ ಸದ್ದು

ಒಂದು ಅಗುಳಿಲ್ಲದೆ ಮುಂದೆ ಸಾಗಿಹೆ ನಾನು
ಮತ್ತೆ ಬೇರೊಂದು ಮನ-ಮನೆಯ ಹುಡುಕಿ
ಇಷ್ಟು ಹುಡುಕಿದ ಮೇಲೆ ಸಿಗದೆ ಹೋಗುವುದೇನು
ಹೆಕ್ಕಿ ತೆಗೆಯುವೆ ಎಲ್ಲ ಮನವನ್ನು ಕೆದಕಿ

ಶುಕ್ರವಾರ, ಮೇ 31, 2013

ಕವನ

ನನಗೆ ಸಿಕ್ಕಿದ್ದು ನನ್ನದೇ ಹಳೆಯ ಕವನ
ಹಳೆಯ ಹುಡುಗಿಯ ಕಂಗಳಲೆ ಅವಿತಿತ್ತು
ಕುಳಿತಿದ್ದೆ ಖಾಲಿಗೊಳಿಸಲು ನನ್ನ ಮನ
ನೆನಪ ವಿಂಗಡಿಸುತಲೊಂದು ಬದಿಯಲಿಟ್ಟು

ತೆಗೆದು ಹಾಕಿದ ಮೇಲೂ ಮತ್ತೆ ಹೆಚ್ಚಿದೆ
ಮನದ ಕಮಾನೊಂದು ಭಾರೀ ಗುಜರಿ
ಬಿಡದೆ ಬಹಳಷ್ಟು ಬಹುದೂರ ಎಸೆದೆ
ತಿರುಗಿಡೊಡನೆಯೆ ಮತ್ತೆ ಹೊಸ ಹಾಜರಿ

ಅತಿಕಷ್ಟದಿಂದ ನುಳುಪುಗೊಳಿಸಿದ ಮನದಿ
ಕುಳಿತಿರುವೆ ಒಂದು ನಿಟ್ಟುಸಿರನಿಟ್ಟು
ಖಾಲಿಹಾಳೆಯಿದೆಂದು ಸುಮ್ಮನಿರದೆ ತೆರೆದೆ
ರಾಶಿಯಾಗಿದೆ ನೆನಪು ಕರುಣೆ ಬಿಟ್ಟು

ಶುಕ್ರವಾರ, ಮೇ 24, 2013

ಬಾಲ್ಯ ವಿವಾಹ


ಮೊನ್ನೆ ತಾನಾಡಿದ್ದ ಮಣ್ಣ ಗೊಂಬೆಯ ಮದುವೆ
ನೆನೆಯುತ್ತಲಿದೆಯೊಂದು ಪುಟ್ಟ ಮನಸು
ಅವಳಿಗೆ ಇಂದೇ ಮದುವೆ
ತುಂಬಿಲ್ಲವಿನ್ನೂ ಹದಿ-ಹರೆಯ ವಯಸು

ಅಚ್ಚ ಹಸುರಿನ ಸೀರೆ,ಅಮ್ಮ ತೊಟ್ಟಿದ್ದ ಒಡವೆ
ಮೆಲ್ಲನೇರುತಿದೆ ಒಡಲ ಸಿಂಗರಿಸಲು
ಎಲ್ಲವೂ ಹಾಗೆಯೇ ಮಣ್ಣ ಗೊಂಬೆಯ ತರವೆ
ಮತ್ತಾರೂ ಸಿಗರೇನು ಅವಳ ಬದಲು

ಇದುವರೆಗೂ ಆಡಿದ್ದ ಅಂಗಳದಲ್ಲೇ ಚೆಪ್ಪರ
ಸುತ್ತಲಿಹ ನೆಂಟರಲಿ ಏನೋ ಬಿಮ್ಮು
ಒರೆಸಿದ ಕಂಬನಿಗೆ ಅಮ್ಮ ಕೊಡಳುತ್ತರ
ಅಪ್ಪನಲೇಕೊ ಎಂದಿರದ ಹಮ್ಮು

ಕುಳಿತಿಲ್ಲವಿಲ್ಲಿ ರಾಜಕುಮಾರ ಅವಳ ಗೊಂಬೆಯ ಹಾಗೆ
ಯಾರ ಕೇಳಬೇಕೀಗ ಉತ್ತರಿಸಲು
ಎದುರ ಹೋಮದ ಉರಿಯು ಬಾಳ ತಾಗಿದೆ ಹೀಗೆ
ಕಣ್ಣೀರೆ ಗತಿ ಇನ್ನು ಸಂತೈಸಲು

ಬುಧವಾರ, ಡಿಸೆಂಬರ್ 19, 2012

ಸೆಳೆತ

ಮತ್ತೆ ಬಾರೆಲೆ ಸಮಯ ನಿನಗೆ ಕಾದಿಹೆ ನಾನು
ಹಿಂದೆ ತಿರುಗದ ನಿನ್ನ ಬಿಂಕವೇನು

ಜಾರಿಬಿಡುತಿಹೆ ನೀನು ನಾನು ಅರಿಯದ ಹಾಗೆ
ಕೈ ಚಾಚಿ ಕಾಯುತಿಹೆ ಕಾಣದೇನು?
ಕಣ್ಣ ಎದುರಿಗೆ ಮೆಲ್ಲ ಕಾಣೆಯಾಗಿಹೆ ಹೇಗೆ
ಕಣ್ಣು ಮಿಟುಕಿಸಿ ಹೋದ ಪರಿಯದೇನು?

ಅರಿಯದಂತೆಯೇ ಸೆಳೆದು, ಮಂಕು ಬೂದಿಯ ಬಳಿದು
ಎಲ್ಲರನು ಎಳೆಯುತಿಹೆ ಎತ್ತ ಕಡೆಗೆ
ನಿಮಿಷ-ನಿಮಿಷವು ಸರಿದು, ನಿನ್ನ ಒನಪಿಗೆ ಬಿದ್ದು
ದಿನ ಮೆಲ್ಲ ಸಾಯುತಿದೆ ನಿನ್ನ ಬಲೆಗೆ

ಸೋಮವಾರ, ಡಿಸೆಂಬರ್ 17, 2012

ಆಗಿಬಿಡಲೇಳೊಮ್ಮೆ ಒಂದು ಪ್ರಳಯ

ಆಗಿಬಿಡಲೇಳೊಮ್ಮೆ ಒಂದು ಪ್ರಳಯ
ಮರುಹುಟ್ಟ ಪಡೆಯಲಿ ಮಹದಾಶಯ

ಮಡುಗಟ್ಟಿ ಹೋದಂತ ಕಣ್ಣೀರ ತೊಳೆದು
ಮರಗಟ್ಟಿ ಹೋದಂತ ಭಾವನೆಯ ಕಡಿದು
ಮತ್ತೆ ಕಾಡುತ ಕುಳಿತ ನೆನಪೆಲ್ಲ ಕಳೆದು
ಮನವ ಕಲಕಲು ಕಾದ ನೆಪವೆಲ್ಲ ಸೆಳೆದು
         ಸಾಗಿಬಿಡಲೇಳೊಮ್ಮೆ ಒಂದು ಪ್ರಳಯ


ಕಾಲ ಕಾಲಕು ನಡೆದ ಕಾಳಗವು ಕರಗಿ
ರುಧಿರಹಾಸಿನ ಮೇಲ ದ್ವೇಷವದು ಮುಳುಗಿ
ಮಣ್ಣ ಮಡಿಲಿನ ಮಗನ ಬವಣೆಯದು ಸೊರಗಿ
ಬರಿಮಾತ ಹೂಡಿಕೆಯ  ತೊಗಲೆಲ್ಲ ತೊಲಗಿ
         ಆಗಿಬಿಡಲೇಳೊಮ್ಮೆ ಒಂದು ಪ್ರಳಯ